ಗದಗ: ರಂಗು ರಂಗಿನ ಬಣ್ಣದಲ್ಲಿ ಮಿಂದೆರುವುದನ್ನು ನೋಡಿದ್ದೀರಿ. ಆದರೆ ಎಂದಾದರೂ ಸಗಣಿಯನ್ನು ಎರಚಿಕೊಂಡು ಹಬ್ಬದಾಚರಣೆ ಮಾಡಿದ್ದನ್ನು ನೋಡಿದ್ದೀರಾ?. ಹೌದು.. ಗದಗ ನಗರದ ಗಂಗಾಪೂರ ಪೇಟೆಯಲ್ಲಿ ನೂರಾರು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇಂದಿಗೂ ಕೂಡ ವಿಶಿಷ್ಟ ಆಚರಣೆ ಇಲ್ಲಿದೆ. ಈ ಬಾರಿಯ ನಾಗರ ಪಂಚಮಿಗೆ ಸಗಣಿಯನ್ನು ಪರಸ್ಪರ ಎರಚಾಡಿಕೊಳ್ಳುವ ಮೂಲಕ ಜನತೆ ಸಂಭ್ರಮಿಸಿದರು. ಗಂಗಾಪೂರ ಪೇಟೆಯಲ್ಲಿರುವ ದೇವಸ್ಥಾನದ ಮುಂದೆ ಜಮಾಯಿಸಿದ ಜನರು, ಕೂಡಿಟ್ಟ ಸಗಣಿಯನ್ನು ರಸ್ತೆಯಲ್ಲಿ ಗುಡ್ಡೆ ಹಾಕಿದರು. ಆ ಗುಡ್ಡೆಗಳಿಗೆ ಕೆಂಪು, ಗುಲಾಬಿ, ಕೇಸರಿ, ಹಳದಿ ಬಣ್ಣಗಳಿಂದ ಶೃಂಗರಿಸಿದರು. ಬಳಿಕ ಸಗಣಿ ಗುಡ್ಡೆ ಪೂಜೆ ಮಾಡಿ, ಸಗಣಿಯಾಟ ಆರಂಭವಾಯಿತು. ಸುಮಾರು ಒಂದೂ ಗಂಟೆಗೂ ಅಧಿಕ ಕಾಲ ಈ ಸಗಣಿ ಫೈಟ್ ನಡೆಯಿತು. ಯಾವುದೇ ಜಾತಿ, ಭೇದವಿಲ್ಲದೆ ಪೇಟೆಯ ಎಲ್ಲಾ ಯುವಕರು ಸಗಣಿ ಎರಚಾಟದಲ್ಲಿ ಪಾಲ್ಗೊಂಡರು. ಸಗಣಿ ಎರಚಾಟಕ್ಕೆಂದೇ ಹಬ್ಬಕ್ಕೂ ಹಿಂದಿನ ಮೂರ್ನಾಲ್ಕು ದಿನಗಳಿಂದ ರೈತರು ತಮ್ಮ ಮನೆಯಲ್ಲಿನ ಸಗಣಿಯನ್ನು ಶೇಖರಣೆ ಮಾಡಿ ಇಡುತ್ತಾರೆ. ಸಗಣಿಯನ್ನು ಪರಸ್ಪರ ದೇಹದ ಮೇಲೆ ಎರಚಿಕೊಳ್ಳುವುದರಿಂದ ಚರ್ಮದ ರೋಗಗಳು ಸೇರಿದಂತೆ ಹಲವು ಕಾಯಿಲೆಗಳು ವಾಸಿ ಆಗುತ್ತವೆ ಅನ್ನೋದು ಇಲ್ಲಿನ ಜನರ ನಂಬಿಕೆ. ಬಣ್ಣದೋಕುಳಿಯಂತೆ ಸಂಭ್ರಮದಿಂದ ನಡೆಯುವ ಯುವಕರ ಸಗಣಿ ಎರಚಾಟದಲ್ಲಿ ರೈತಾಪಿ ವರ್ಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿರುತ್ತಾರೆ. ವರ್ಷಕ್ಕೆ ಒಂದು ಬಾರಿ ಸಗಣಿ ಎರಚಾಟದ ಆಟವನ್ನು ನೋಡುವುದೇ ಒಂದು ಸಂಭ್ರಮ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ: ವಿಡಿಯೋ