ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇಂದು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರು. ಯಡಿಯೂರಪ್ಪ ಅವರ ಮೊಮ್ಮಗ, ಸಂಸದ ರಾಘವೇಂದ್ರ ಅವರ ಹಿರಿಯ ಪುತ್ರ ಸುಭಾಷ್ ಅವರ ವಿವಾಹ ಆರತಕ್ಷತೆ ಶಿಕಾರಿಪುರ ಕುಮದ್ವತಿ ಕಾಲೇಜು ಆವರಣದಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗಮಿಸಿದ್ದರು. ನವ ದಂಪತಿಗೆ ಶುಭಾಶಯ ಕೋರಲು ವೇದಿಕೆಗೆ ಆಗಮಿಸಿದಾಗ ಸ್ವತಃ ಯಡಿಯೂರಪ್ಪನವರೇ ಈಶ್ವರಪ್ಪರನ್ನು ಬರಮಾಡಿಕೊಂಡರು. ನಂತರ ಯಡಿಯೂರಪ್ಪ ಈಶ್ವರಪ್ಪನವರ ಹೆಗಲ ಮೇಲೆ ಕೈ ಹಾಕಿ ಆತ್ಮೀಯವಾಗಿ ಕೆಲಕಾಲ ಮಾತನಾಡಿದರು. ಈಶ್ವರಪ್ಪ ನವಜೋಡಿಗೆ ಶುಭಹಾರೈಸಿ ವಾಪಸ್ ಆಗುವಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎದುರಾದರು. ಈ ವೇಳೆ ಈಶ್ವರಪ್ಪ ಹಾಗೂ ವಿಜಯೇಂದ್ರ ಆತ್ಮೀಯವಾಗಿ ಮಾತನಾಡಿದರು. ಈಶ್ವರಪ್ಪನವರು ವಿಜಯೇಂದ್ರರ ಭುಜ ತಟ್ಟಿ ನಗುತ್ತಾ ವಾಪಸ್ ಆದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪನವರು ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಂತರ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದರು.ಇದನ್ನೂ ಓದಿ: ವಿಡಿಯೋ: ನಾಗಾರ್ಜುನ ಕಿರಿಮಗನ ಆರತಕ್ಷತೆ ಕಾರ್ಯಕ್ರಮದಲ್ಲಿ ಯಶ್, ಸುದೀಪ್ ಸೇರಿ ಗಣ್ಯರು