ಹಾವೇರಿ : ದನ ಬೆದರಿಸುವ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲೂ ಹೆಸರು ಮಾಡಿದ್ದ ಕಾಶಂಬಿಯ ಹುಲಿ ಖ್ಯಾತಿಯ ಕೊಬ್ಬರಿಹೋರಿ ಸಾವನ್ನಪ್ಪಿದೆ. ಬ್ಯಾಡಗಿ ತಾಲೂಕು ಕಾಶಂಬಿ ಗ್ರಾಮದ ಹೋರಿ ಕಾಶಂಬಿ ಹುಲಿ ಎಂದೇ ಆಖಾಡದಲ್ಲಿ ಪ್ರಸಿದ್ಧಿಯಾಗಿತ್ತು. ಕಳೆದ ಕೆಲ ದಿನಗಳಿಂದ ಹೋರಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿತ್ತು. ಕಳೆದ 15 ವರ್ಷಗಳಿಂದ ಹಾವೇರಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲದೆ ನೆರೆ ರಾಜ್ಯದ ಸ್ಪರ್ಧೆಯಲ್ಲೂ ಭಾಗವಹಿಸಿ ತನ್ನದೇ ಛಾಪು ಮೂಡಿಸಿತ್ತು. ದನ ಬೆದರಿಸುವ ಸ್ಪರ್ಧೆಯಲ್ಲಿ ಪೀಪಿ ಹೋರಿಯಾಗಿದ್ದ ಕಾಶಂಬಿ ಹುಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಬೆಳ್ಳಿಯ ಬಸವಣ್ಣ ಮೂರ್ತಿ, ಬಂಗಾರದ ಉಂಗುರ, ಫ್ರಿಡ್ಜ್, ಟಿವಿ ಸೇರಿದಂತೆ ವಿವಿಧ ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು. 15 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವಿಶ್ರಾಂತಿಯಲ್ಲಿತ್ತು. ಹೋರಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ರಾಜ್ಯದ ವಿವಿಧೆಡೆಯಲ್ಲಿರುವ ಅಭಿಮಾನಿಗಳು ಆಗಮಿಸಿ ನೆಚ್ಚಿನ ಹೋರಿಯ ದರ್ಶನ ಪಡೆದರು. ಪೂಜೆ ಸಲ್ಲಿಸಿ ಅಂತಿಮದರ್ಶನ ಪಡೆದರು. ಹೋರಿ ಮಾಲೀಕ ರಮೇಶ ಮುತ್ತಳ್ಳಿ ಅವರ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ಅಭಿಮಾನಿಗಳು ತಂದಿದ್ದ ಮಾಲೆಗಳಿಂದ ಮತ್ತು ಸ್ಪರ್ಧೆಗೆ ಬಳಸುತ್ತಿದ್ದ ವಸ್ತುಗಳಿಂದ ಹೋರಿಯ ಕಳೇಬರವನ್ನು ಅಲಂಕರಿಸಲಾಗಿತ್ತು. ಮನುಷ್ಯರು ನಿಧನರಾದಾಗ ಭಜನೆ ಮಾಡುವಂತೆ ಇಲ್ಲೂ ಭಜನೆ ಕಂಡುಬಂತು. ನಂತರ ಗ್ರಾಮದಲ್ಲಿ ಸಿಂಗರಿಸಿದ ಟ್ರ್ಯಾಕ್ಟರ್ನಲ್ಲಿ ಹೋರಿಯ ಅಂತಿಮಯಾತ್ರೆ ನಡೆಸಲಾಯಿತು. ಹಿಂದೂ ಸಂಪ್ರದಾಯದಂತೆ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: