ದಾವಣಗೆರೆ: ಗಣೇಶ ಚತುರ್ಥಿ ಇನ್ನೂ ಒಂದು ತಿಂಗಳು ಬಾಕಿಯಿರುವಾಗಲೇ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದು, ಜಿಲ್ಲೆಯ ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಿಷೇಧದ ಹೊರತು ತಯಾರಿಸಲಾಗಿದ್ದ 9 ಪಿಒಪಿ ಗಣಪತಿ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.ತಾಲೂಕಾ ಆಡಳಿತದಿಂದ ಕಾರ್ಯಾಚರಣೆ ಆರಂಭಿಸಿದ್ದು, ಗ್ರಾಮದಲ್ಲಿ 5 ರಿಂದ 6 ಅಡಿ ಎತ್ತರದ 9 ಪಿಒಪಿ ಗಣಪತಿ ಮೂರ್ತಿಗಳನ್ನು ವಶಕ್ಕೆ ಪಡೆದಿರುವುದಾಗಿ ಚನ್ನಗಿರಿ-ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಅವರು ಈಟಿವಿ ಭಾರತಕ್ಕೆ ಖಚಿತಪಡಿಸಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕ. ಹಾಗಾಗಿ ಪಿಒಪಿ ಮೂರ್ತಿಗಳನ್ನು ತಯಾರಿಸದಂತೆ ಮತ್ತು ಮಾರಾಟ ಮಾಡದಂತೆ ನಿಷೇಧವಿದೆ. ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಿ ಮುಜರಾಯಿ ಇಲಾಖೆಗೆ ಸೇರಿದ ಕಲ್ಲೇಶ್ವರ ದೇವಾಲಯದಲ್ಲಿ ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಲಿಂಗಾಪುರದ ಅರುಣ್ ಎಂಬುವವರಿಗೆ ಸೇರಿದ 9 ಮೂರ್ತಿಗಳನ್ನು ವಶಕ್ಕೆ ಪಡೆದು ದೂರು ದಾಖಲಿಸುವಂತೆ ಗ್ರಾಮ ಪಂಚಾಯತಿಗೆ ಸೂಚನೆ ನೀಡಿರುವುದಾಗಿ ಎಸಿ ಅಭಿಷೇಕ್ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸಿ ಅಭಿಷೇಕ್ "ಪರಿಸರಕ್ಕೆ ಹಾನಿ ತರುವ ಪಿಒಪಿ ಗಣೇಶ ಮೂರ್ತಿಗಳನ್ನು ಸರ್ಕಾರ ನಿಷೇಧಿಸಿದೆ. ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದ ಕಲ್ಲೇಶ್ವರ ದೇವಾಲಯದಲ್ಲಿ ಗಣೇಶ ಮೂರ್ತಿಗಳನ್ನು ಸಂಗ್ರಹಿಸಡಲಾಗಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಮೂರ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಪರವಾನಿಗೆ ಇಲ್ಲದೆ ಮಾರಾಟಕ್ಕೆ ಸಿದ್ಧಪಡಿಸಿದ್ದಲ್ಲದೇ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ವಿಗ್ರಹಗಳನ್ನು ಸಂಗ್ರಹಿಸಿಡಲಾಗಿತ್ತು. ಕ್ರಮ ಜರಗಿಸುವಂತೆ ಸಂಬಂಧಪಟ್ಟ ಪಿಡಿಒ ಅವರಿಗೆ ತಿಳಿಸಿದ್ದೇನೆ. ದಂಡ ಕೂಡ ವಿಧಿಸಲಾಗಿದೆ" ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನಸಿನಲ್ಲಿ ಬಂದ ಸ್ಥಳದಲ್ಲೇ ಸಿಕ್ತು ಶ್ರೀಕೃಷ್ಣನ ಭಗ್ನ ಮೂರ್ತಿ: ಒಂದೇ ವರ್ಷದಲ್ಲಿ ತಲೆಯೆತ್ತಿ ನಿಂತ ಭವ್ಯ ದೇಗುಲ - GOPALAKRISHAN TEMPLE